ಏರಣ್: ಮಧ್ಯಪ್ರದೇಶ ರಾಜ್ಯದ ಸಾಗರ ಜಿಲ್ಲೆಯಲ್ಲಿ ಬೀನ ನದಿಯ ದಡದಲ್ಲಿರುವ ಒಂದು ಸಣ್ಣ ಗ್ರಾಮ. ಪ್ರ.ಶ.ಪು. 2000ದಿಂದ 700 ವರ್ಷಗಳವರೆಗೂ ಇಲ್ಲಿ ತಾಮ್ರಶಿಲಾಯುಗದ ಸಂಸ್ಕೃತಿ ನೆಲೆಸಿದ್ದು, ಸೂಕ್ಷ್ಮಶಿಲಾಯುಧಗಳೂ ಕೆಂಪು ಹಿನ್ನೆಲೆಯ ಮೇಲೆ ಕಪ್ಪು ಬಣ್ಣದಿಂದ ಚಿತ್ರಿತವಾದ ಮಡಕೆಗಳೂ ಉಪಯೋಗದಲ್ಲಿದ್ದುದಾಗಿ ಇಲ್ಲಿ ನಡೆದ ಭೂ ಶೋಧನೆಗಳಿಂದ ತಿಳಿದುಬಂದಿದೆ. ವ್ಯವಸಾಯ ಪ್ರಧಾನವಾದ ಈ ಸಂಸ್ಕೃತಿ ಪ್ರ.ಶ.ಪು. ಸುಮಾರು 700ರ ವೇಳೆಗೆ ಕೊನೆಗೊಂಡು ಕಬ್ಬಿಣಯುಗದ ಮತ್ತು ಪ್ರಾಚೀನ ಐತಿಹಾಸಿಕ ಸಂಸ್ಕೃತಿಗಳ ಲಕ್ಷಣಗಳನ್ನೊಳಗೊಂಡ ಸಂಸ್ಕೃತಿಯೊಂದು ಪ್ರಾರಂಭವಾಯಿತು. ಅನಂತರ ಇಲ್ಲಿ ಸುವ್ಯವಸ್ಥಿತ ರಾಜ್ಯಪದ್ಧತಿ ಬಳಕೆಗೆ ಬಂದಂತೆ ಕಾಣುತ್ತದೆ. ಭಾರತದಲ್ಲೇ ಅತ್ಯಂತ ಪ್ರಾಚೀನ ಲಿಪಿಯುಕ್ತ ನಾಣ್ಯಗಳು ಇಲ್ಲಿ ದೊರೆತಿವೆ. ಅಶೋಕನ ಕಾಲದ್ದಕ್ಕಿಂತ ಹಳೆಯ ಬ್ರಾಹ್ಮೀಲಿಪಿಯಲ್ಲಿ ಧರ್ಮಪಾಲಸ ಮತ್ತು ಏರಾಕನ್ಯ ಎಂಬ ಬರೆಹಗಳನ್ನು ಉಳ್ಳ ತಾಮ್ರದ ಅಥವಾ ಕಂಚಿನ ನಾಣ್ಯಗಳು ಇಲ್ಲಿ ದೊರಕಿವೆ. ಕೆಲವು ನಾಣ್ಯಗಳ ಮೇಲೆ ನದಿಯ ಚಿಹ್ನೆ ಕಂಡು ಬರುತ್ತದೆ. ಈ ನಾಣ್ಯಗಳು ವಿದೇಶೀ ನಾಣ್ಯಪದ್ಧತಿಯಿಂದ ಪ್ರಭಾವಿತವಾಗಿರುವುವೆಂದು ನಿಸ್ಸಂದೇಹವಾಗಿ ಹೇಳಬಹುದು. ಸಮುದ್ರಗುಪ್ತನ ಒಂದು ಶಾಸನವೂ ಪ್ರ.ಶ. 5ನೆಯದರಿಂದ 11ನೆಯ ಶತಮಾನದವರೆಗಿನ ಕಟ್ಟಡಗಳೂ ಇಲ್ಲಿ ದೊರಕಿವೆ. ಇಲ್ಲಿನ ಒಂದೇ ಕಲ್ಲಿನ ಸ್ತಂಭ, ವಿಷ್ಣು, ವರಾಹ ಮತ್ತು ನರಸಿಂಹ ದೇವಾಲಯಗಳು ಉತ್ತರಕಾಲೀನ ಗುಪ್ತರ ಕಾಲಕ್ಕೆ ಸೇರಿದವು. ಏರಣ್ವರೆಗೂ ದಾಳಿಮಾಡಿದ ಹೂಣರನ್ನು ಭಾನುಗುಪ್ತ ಸೋಲಿಸಿ ಓಡಿಸಿದ.	  (ಬಿ.ಕೆ.ಜಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ